ವುಡ್‍ವರ್ಡ್, ರಾಬರ್ಟ್ ಬನ್ರ್ಸ್
	1917-79. ಅತ್ಯಂತ ಕ್ಲಿಷ್ಟ ಅಣುಸಂರಚನೆಯುಳ್ಳ ಸಾವಯವ ಸಂಯುಕ್ತಗಳ ಸಂಶ್ಲೇಷಣೆಯಲ್ಲಿ ನಿಷ್ಣಾತನಾದ ಅಮೆರಿಕದ ಸುಪ್ರಸಿದ್ಧ ಸಾವಯವ ರಸಾಯನ ವಿಜ್ಞಾನಿ. 1965ರಲ್ಲಿ ನೊಬೆಲ್ ಪಾರಿತೋಷಿಕ ಪಡೆದಾತ. 1917ರಲ್ಲಿ ಬೋಸ್ಟನ್ ನಲ್ಲಿ ಜನಿಸಿದ. ಎರಡು ವರ್ಷದವನಿದ್ದಾಗ ತಂದೆಯನ್ನು ಕಳೆದುಕೊಂಡು, ತಾಯಿಯ ಪಾಲನೆ ಪೋಷಣೆಯಲ್ಲಿ ಬೆಳೆದ. ಮನೆಯ ಪ್ರಯೋಗಶಾಲೆ ಯಲ್ಲಿಯೇ ರಾಸಾಯನಿಕ ಪ್ರಯೋಗಗಳನ್ನು ಮಾಡುತ್ತಿದ್ದ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿಯೇ ರಸಾಯನವಿಜ್ಞಾನದತ್ತ ಆಕರ್ಷಿತನಾದ. 16ನೆಯ ವಯಸ್ಸಿನಲ್ಲಿ ಎಮ್.ಐ.ಟಿ. ಸೇರಿದ. ಆದರೆ ಆತನ ಅಸಾಮಾನ್ಯ ಪ್ರಯೋಗಪ್ರಿಯತೆ ಹಾಗೂ ವಾಚನಾಲಯದಲ್ಲಿ ಓದುವ ಹವ್ಯಾಸದಿಂದಾಗಿ ತರಗತಿಯಲ್ಲಿ ಪಾರಂಪರಿಕ ಅಧ್ಯಯನದಲ್ಲಿ ಹಿಂದುಳಿದ. ಆದ್ದರಿಂದ ಆತನನ್ನು ಕಾಲೇಜಿನಿಂದ ಒಂದು ವರ್ಷ ಅಮಾನತ್ತಿನಲ್ಲಿಡಲಾಯಿತು. ಆದರೂ ಅನಂತರ ತನ್ನ ಜೊತೆ ಕಾಲೇಜು ಸೇರಿದವರಿಗಿಂತ ಒಂದು ವರ್ಷ ಮೊದಲೇ ಬಿ.ಎಸ್. ಪದವಿಯನ್ನೂ ಅನಂತರ ಒಂದೇ ವರ್ಷದಲ್ಲಿ ಪಿಎಚ್.ಡಿ. ಪದವಿಯನ್ನೂ ಪಡೆದ. ಉನ್ನತ ಅಧ್ಯಯನಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಿದ, ಜೀವಮಾನವಿಡೀ ಅಲ್ಲಿಯೇ ಉಳಿದ.

	ಪ್ರಾಕೃತಿಕ ಸಂಯುಕ್ತಗಳ ರಸಾಯನವಿಜ್ಞಾನ ಈತನ ಸಂಶೋಧನಾ ಕ್ಷೇತ್ರದ ಮೂಲವಸ್ತು. ಔಷಧೀಯವಾಗಿ ಅಥವಾ ಬೇರೊಂದು ರೀತಿಯಲ್ಲಿ ಮಹತ್ತ್ವದ ಮತ್ತು ಅತ್ಯಂತ ಕ್ಲಿಷ್ಟ ಅಣುಸಂರಚನೆಯ ಪ್ರಾಕೃತಿಕ ಸಂಯುಕ್ತಗಳ ಅಣುಸಂರಚನೆ ಶೋಧನೆ ಹಾಗೂ ಅವುಗಳ ಸಂಶ್ಲೇಷಣೆ ಇವುಗಳ ಮೂಲಕ ರಸಾಯನವಿಜ್ಞಾನಕ್ಕೆ ಅಗಾಧ ಕೊಡುಗೆ ಕೊಟ್ಟವನೀತ. 1940ರ ದಶಕದಲ್ಲಿ ಸ್ಟೀರಾಯ್ಡ್‍ಗಳ ಬಗ್ಗೆ ಸಂಶೋಧನೆ ಮಾಡುವಾಗ ಅಣುವಿನ ಸಂರಚನೆ ಮತ್ತು ಅದರ ಅತಿನೇರಿಳೆ ರೋಹಿತಕ್ಕೂ ಕ್ರಮಬದ್ಧ ಸಂಬಂಧವಿರುವುದನ್ನು ಕಂಡ. ಅದೇ ಅನಂತರ “ವುಡ್‍ವರ್ಡ್ ಫೀಜರ್ ನಿಯಮಗಳು” ಎಂದು ಪ್ರಸಿದ್ಧವಾಯಿತು. ಈ ನಿಯಮಗಳನ್ನು ಅನ್ವಯಿಸಿ, ರಾಸಾಯನಿಕ ಕ್ರಿಯೆಗೆ ಒಳಪಡಿಸುವ ಪೂರ್ವಭಾವಿಯಾಗಿಯೇ ಅಣುವೊಂದರ ಅತಿನೇರಿಳೆ ರೋಹಿತವನ್ನು ಪರೀಕ್ಷಿಸಿ ಅದರ ಅಣುಸಂರಚನೆಯ ಶೋಧನೆ ಸಾಧ್ಯವಾಯಿತು. ಅಣುಸಂರಚನಾ ನಿರೂಪಣೆಯಲ್ಲಿ ಈ ಸಾಧನೆ ಸಂರಚನಾಸಮಸ್ಯೆಯನ್ನು ಬಿಡಿಸುವುದಕ್ಕಷ್ಟೆ ಸೀಮಿತವಾಗಿರದೇ ನಿರೂಪಣೆಯ ಪ್ರಕ್ರಿಯೆಯಲ್ಲಿ ಹೊಸ ರಸಾಯನವಿಜ್ಞಾನವನ್ನು ರೂಪಿಸುವುದು ಈತನ ವೈಶಿಷ್ಟ್ಯ. ಪೆನಿಸಿಲಿನ್, ಸ್ಟ್ರಿಕ್ನೀನ್, ಆಕ್ಸಿಟೆಟ್ರಾಸೈಕ್ಲೀನ್, ಎಲಿಪ್ಟಿಸೀನ್-ಇವು ಈತ ಅಣುಸಂರಚನಾ ನಿರೂಪಿಸಿದ ಪ್ರಾಕೃತಿಕ ಸಂಯುಕ್ತಗಳಲ್ಲಿ ಕೆಲವು.

	ನಿಸ್ಸಂದೇಹವಾಗಿ ಈತ ಅತಿಸಂಕೀರ್ಣ ರಚನೆಯುಳ್ಳ ಅಣುಗಳನ್ನು ಸಂಶ್ಲೇಷಿಸಬಲ್ಲ ಮಹಾಮೇಧಾವಿಯಾಗಿದ್ದ. ರಾಸಾಯನಿಕ ಕ್ರಿಯಾ ಪ್ರಕ್ರಿಯೆಯ ಜ್ಞಾನ, ಸಾಧನಗಳ ಸರಿದೂಗಿದ ಬಳಕೆ ಇವು ಪೂರ್ವಭಾವಿ ಯೋಜನೆ ಹಾಗೂ ರಾಸಾಯನಿಕ ಕ್ರಿಯೆಗಳ ಶ್ರೇಣಿಯನ್ನೊಳಗೊಂಡ ಸಂಶ್ಲೇಷಣೆಯ ಯಶಸ್ಸಿಗೆ ಕಾರಣವಾಗುತ್ತವೆ ಎಂದು ತೋರಿಸಿಕೊಟ್ಟ. ಈತನ ಶಿಸ್ತು, ಸಂಶ್ಲೇಷಣ ರಸಾಯನ ವಿಜ್ಞಾನಕ್ಕೆ ದಾರಿದೀಪವಾಯಿತು. ಅಂತೆಯೇ ಈತನನ್ನು ಆಧುನಿಕ ಸಂಶ್ಲೇಷಣೆಯ ಪಿತಾಮಹ ಎನ್ನುತ್ತಾರೆ. ಈತ ಸಂಶ್ಲೇಷಿಸಿದ ಕೆಲವು ಪ್ರಾಕೃತಿಕ ಸಂಯುಕ್ತಗಳೆಂದರೆ ಸ್ಟ್ರಿಕ್ನೀನ್, ಕೊಲೆಸ್ಟೆರಾಲ್, ಕಾರ್ಟಿಸೋನ್, ಕ್ಲೋರೋಫಿಲ್, ರಿಸರ್ಪಿನ್. ಈತ ಸಾಧಿಸಿದ ಜೀವಸತ್ವ-ಃ12 ರ ಸಂಶ್ಲೇಷಣೆ ಇಂದಿಗೂ ಒಟ್ಟು ರಾಸಾಯನಿಕ ಸಂಶ್ಲೇಷಣೆಗಳಲ್ಲಿ ಮೇರು ಸಂಶ್ಲೇಷಣೆ ಎಂದು ಪರಿಗಣಿತವಾಗಿದೆ. ನೂರಕ್ಕಿಂತ ಅಧಿಕ ರಾಸಾಯನಿಕ ಕ್ರಿಯೆಗಳ ಶ್ರೇಣಿಯ ಈ ಸಂಶ್ಲೇಷಣೆಯಲ್ಲಿ ಈತನೊಂದಿಗೆ ಸ್ವಿಟ್ಜರ್ಲೆಂಡಿನ ಪ್ರಖ್ಯಾತ ರಸಾಯನ ವಿಜ್ಞಾನಿ ಸೇರಿದಂತೆ ಒಂದು ನೂರು ಸಹಸಂಶೋಧಕರು ಒಂದು ದಶಕದ ಪರ್ಯಂತ ತೊಡಗಿದ್ದರು.

	ಈತ 1960ರ ದಶಕದಲ್ಲಿ ಸಾವಯವ ರಸಾಯನವಿಜ್ಞಾನದಲ್ಲಾದ ಅತ್ಯಂತ ಶ್ರೇಷ್ಠ ತಾತ್ತ್ವಿಕ ಬೆಳೆವಣಿಗೆಗೆ ಕಾರಣನಾದ. ತ್ರಿ-ಆಯಾಮ ಸಂರಚನೆಯಲ್ಲಿ ಮಾತ್ರ ವ್ಯತ್ಯಾಸವಿರುವ ಎರಡು ಸಂಯುಕ್ತಗಳು ಲಭಿಸಬೇಕಾಗಿದ್ದ ಒಂದು ವಿಶಿಷ್ಟ ಸಂಶ್ಲೇಷಣೆಯಲ್ಲಿ ಕೌತುಕವನ್ನೊಂದು ಕಂಡ. ಉಷ್ಣಪ್ರಚೋದಿತ ಪ್ರಕ್ರಿಯೆಯಲ್ಲಿ ತ್ರಿ-ಆಯಾಮ ಸಂರಚನೆ ಇರುವ ಒಂದು ಸಂಯುಕ್ತ ಲಭಿಸಿದರೆ ದ್ಯುತಿಪ್ರಚೋದಿತ ಪ್ರಕ್ರಿಯೆಯಲ್ಲಿ ತದ್ವಿರುದ್ಧ ಸಂರಚನೆ ಇರುವ ಇನ್ನೊಂದು ಸಂಯುಕ್ತ ಲಭಿಸಿತು. ಈ ವೈಚಿತ್ರ್ಯವನ್ನೆ ಅದೇ ವಿಶ್ವವಿದ್ಯಾಲಯದ ಸಂಶೋಧಕ ಹಾಫ್‍ಮನ್ ಜೊತೆ ಚರ್ಚಿಸಿ ಒಂದು ತಾತ್ತ್ವಿಕ ಆವಿಷ್ಕಾರ ಮಾಡಿದ. ಅದೇ ಅನಂತರ “ಪರಿಚಕ್ರೀಯ (ಪೆರಿಸೈಕ್ಲಿಕ್) ಕ್ರಿಯೆಗಳ ಬಗ್ಗೆ ವುಡ್‍ವರ್ಡ್-ಹಾಫ್‍ಮನ್ ನಿಯಮಗಳು” ಎಂದು ಪ್ರಸಿದ್ಧವಾಯಿತು. ಈ ಆವಿಷ್ಕಾರಕ್ಕೆ ಹಾಫ್‍ಮನ್‍ನಿಗೆ 1965ರ ನೊಬೆಲ್ ಪಾರಿತೋಷಿಕ ದೊರೆಯಿತು.

	ನ್ಯಾಶನಲ್ ಅಕಾಡೆಮಿ, ವಾಷಿಂಗ್‍ಟನ್, ರಾಯಲ್ ಸೊಸೈಟಿ ಲಂಡನ್ ಸೇರಿದಂತೆ ಅನೇಕ ದೇಶದ ವೈಜ್ಞಾನಿಕ ಸಂಸ್ಥೆಗಳು ಸದಸ್ಯತ್ವ ವನ್ನು ಕೊಟ್ಟು ಈತನನ್ನು ಗೌರವಿಸಿದುವು. ಬಾಸೆಲ್‍ನಲ್ಲಿ ವುಡ್‍ವರ್ಡ್ ಸಂಶೋಧನಾ ಸಂಸ್ಥೆ ನಿರ್ಮಿಸಿ, ಸ್ವಿಟ್ಜರ್ಲೆಂಡ್ ಈತನನ್ನು ವಿಶಿಷ್ಟ ರೀತಿಯಲ್ಲಿ ಗೌರವಿಸಿತು.					
		(ಎಸ್.ವೈ.ಎ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ